ಶಿವಮೊಗ್ಗ -15ಜೂನ್:

ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ-ಸೀಸದ ವಿಷಬಾಧೆ ತಡೆಯಲು ಎಲ್ಲರೂ ಸಹಕರಿಸಬೇಕು : ಡಾ.ತುಪ್ಪಿಲ್ ವೆಂಕಟೇಶ್..
ಮಕ್ಕಳಲ್ಲಿ ಸೀಸದ(ಲೆಡ್)ಅಂಶ ಹೆಚ್ಚಾಗುವುದು ಅವರ ಮೆದುಳಿನ ವಿಕಾಸದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುವುದರಿಂದ ಇದನ್ನು ಸೀಸದ ವಿಷ ಬಾಧೆ ಎಂದು ಕರೆಯಲಾಗುತ್ತದೆ. ಇದನ್ನು ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ‘ಭಾರತದ ಲೆಡ್ ಮ್ಯಾನ್’ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಪರಿಸರ ವಿಜ್ಞಾನಿ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ತುಪ್ಪಿಲ್ ವೆಂಕಟೇಶ್ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೆದುಳು ಬೆಳವಣಿಗೆಯ ಹಂತದಲ್ಲಿರುವುದರರಿಂದ ಸೀಸದ ಅಂಶವು ಅವರ ನರಮಂಡಲದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಸೀಸದ ಪ್ರಮಾಣ ಹೆಚ್ಚಾದಂತೆ ಮಗುವಿನ ಬುದ್ದಮತ್ತೆ(ಐಕ್ಯೂ) ಮಟ್ಟ ಕುಸಿಯುತ್ತದೆ. ಕಲಿತದ್ದು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ವರ್ತನೆಯಲ್ಲಿ ಬದಲಾವಣೆಯನ್ನು ಸಹ ಕಾಣಬಹುದಾಗಿದ್ದು ಈ ಬಗ್ಗೆ ಶಿಕ್ಷಕರು, ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಬಣ್ಣಗಳು, ಆಟಿಕೆಗಳು, ಆಹಾರ, ತರಕಾರಿ, ಕಲುಷಿತ ನೀರು, ಪೆನ್ಸಿಲ್, ನ್ಯೂಸ್ ಪೇಪರ್ ಪೊಟ್ಟಣಗಳು, ಹೇರ್ ಡೈ ಹೀಗೆ ವಿವಿಧ ಪದಾರ್ಥಗಳಲ್ಲಿ ಸೀಸವನ್ನು ಕಾಣಬಹುದಾಗಿದ್ದು ಇವುಗಳ ಬಳಕೆ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಸ್ವಚ್ಚತೆ ಕಾಪಾಡುವುದು, ಪೌಷ್ಟಿಕ ಆಹಾರ ಸೇವನೆ ಸೇರಿದಂತೆ ಸೀಸ ಅಂಶ ಇರುವ ವಸ್ತುಗಳಿಂದ ದೂರ ಇರಬೇಕು. ಹಾಗೂ ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಕಂಡುಬದರೆ ವೈದ್ಯರನ್ನು ಭೇಟಿಯಾಗಿ ರಕ್ತದಲ್ಲಿನ ಸೀಸದ ಪ್ರಮಾಣ ಪರೀಕ್ಷೆ ಮಾಡಿಸಬೇಕು.
ಈ ರಕ್ತ ಪರೀಕ್ಷೆಗೆ ಸುಮಾರು 1200 ಖರ್ಚು ಮಾಡಬೇಕಾಗುತ್ತದೆ. ಆದರೆ ಇಂದು ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ರಕ್ತದ ಪರೀಕ್ಷೆ ಮೂಲಕ ಸೀಸದ ಅಂಶವನ್ನು ಪರೀಕ್ಷಿಸಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಇದನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಈವರೆಗೆ ಸುಮಾರು 50 ರಿಂದ 60 ಸಾವಿರ ಶಿಕ್ಷಕರಿಗೆ ಸೀಸದ ಬಗ್ಗೆ ಶಿಕ್ಷಣ ನೀಡಿ ಅರಿವು ಮೂಡಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಿಟಿ ಸ್ಮಾರ್ಟ್ ಆದರೆ ಸಾಲದು, ಜೊತೆಗೆ ಎಲ್ಲರೂ ಸ್ಮಾರ್ಟ್ ಪೀಪಲ್ ಮತ್ತು ಸ್ಮಾರ್ಟ್ ಚಿಲ್ಡçನ್ ಆಗಬೇಕೆಂದು ಕರೆ ನೀಡಿದ ಅವರು ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ ಎಂದರು.
ಡಾ.ಶಶಿಧರ್ ಮಾತನಾಡಿ, ಸೀಸವು ಮಕ್ಕಳ ಬುದ್ದಿಶಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾವು ಒಮ್ಮೆ ಲಕ್ನೋ ಮೆಡಿಕಲ್ ಕಾಲೇಜಿಗೆ ಹೋದಾಗ, ಒಂದು ಮುದ್ದಾದ ಚಿಕ್ಕ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಮಗು ತುಂಬಾ ಚೆನ್ನಾಗಿದ್ದರೂ ಮಂದವಾಗಿತ್ತು. ಆ ಮಗುವಿನ ರಕ್ತದಲ್ಲಿ ಸೀಸದ ಪ್ರಮಾಣ ಹೆಚ್ಚಾಗಿದ್ದು ಮಗುವಿನ ಮೆದುಳಿನ ವಿಕಾಸ ಕುಂಠಿತವಾಗಿತ್ತು. ಸೀಸದ ಕುರಿತು ಎಲ್ಲರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದ್ದು ಸ್ವಚ್ಚತೆ, ಪೌಷ್ಟಿಕತೆ ಕಡೆ ಗಮನ ಕೊಡಬೇಕು. ನ್ಯೂಸ್ ಪೇಪರ್‌ಲ್ಲಿ ಆಹಾರ ಪೊಟ್ಟಣ ಕಟ್ಟಬಾರದು ಎಂದು ತಿಳಿಸಿದರು.
ದಲ್ಲಾಸ್‌ನ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ, ಸೀಸವು ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುವುದರಿಂದ ಮಗುವಿನ ಜ್ಞಾಪಕ ಶಕ್ತಿ, ಗಮನ, ಐಕ್ಯೂ ಮೇಲೆ ಪರಿಣಾಮ ಬೀರಿ ಕಲಿಕಾ ನ್ಯೂನ್ಯತೆ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಆದ್ದರಿಂದ ಈಬಗ್ಗೆಮುಖ್ಯವಾಗಿ ಪೋಷಕರು, ಶಿಕ್ಷಕರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಸೀಸ ದೇಹ ಪ್ರವೇಶಿಸುವದನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೊಂದು ಬಹು ಪ್ರಮುಖವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಕೆಎಫ್‌ಡಿ ನೋಡಲ್ ಅಧಿಕಾರಿ ಡಾ.ಹರ್ಷವರ್ಧನ್, ಸುಬ್ಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಬಾಲು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಧನಂಜಯ ರಾಂಪುರ್, ವಿಜಯಕುಮಾರ್, ಮಹೇಶ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಗುಡದಪ್ಪ ಕಸಬಿ ಕಾರ್ಯಕ್ರಮ ನಿರ್ವಹಿಸಿದರು.
ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ತರಬೇತಿ..!!

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ:01/07/2026 ರಿಂದ 13 ದಿನಗಳ ಕಾಲ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಶಿಬಿರದಲ್ಲಿ ಕುರಿ ಸಾಕಾಣಿಕೆ ಜೊತೆಗೆ ವೈಜ್ಙಾನಿಕ ರೀತಿಯಲ್ಲಿ ಹಸು ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ತೋಟಗಾರಿಕಾ ಬೆಳೆಗಳು, ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 50 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.ಆಸಕ್ತಿಯುಳ್ಳ ಅಭ್ಯರ್ಥಿಗಳು ಜೂ. 22 ರಂದು ಬೆಳಿಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ : 22/06/2026 ರೊಳಗೆ ಸಂಸ್ಥೆಯನ್ನು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050, 6363139123, 9886935603, 9591514154, 9686248369 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ..!!

ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ169ಎ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ (ಜಲ್ಲಿ ಮತ್ತು ಸರಕು ಸಾಗಾಣೆ ತುಂಬಿದ ವಾಹನಗಳ) ಸಂಚಾರವನ್ನು ದಿ: 15/06/2026 ರಿಂದ ಮಳೆಗಾಲ ಮುಗಿಯುವವರೆಗೂ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿರುತ್ತಾರೆ.

ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಹೆಚ್ಚಿನ ಓಡಾಟವಿದ್ದು, ಮುಂದಿನ ದಿನಗಳಲ್ಲಿಯೂ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿಯ ಭೂಕುಸಿತ ಆಗುವ, ಅಫಘಾತವಾಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಂಭವ ಇರುತ್ತದೆ. ಹಾಗೂ ಅರೋಗ್ಯ ಸಮಸ್ಯೆಯ ಕುರಿತು ಮಣಿಪಾಲ್, ಉಡುಪಿ, ಮಂಗಳೂರಿಗೆ ಹೋಗುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ನಾಗರಿಕರಿಗೆ ಇರುವ ಸಂಪರ್ಕ ಬಂದ್ ಆದರೆ ನಾಲ್ಕು ಜಿಲ್ಲೆಯ ನಾಗರೀಕರಿಗೆ ತುಂಬಾ ತೊಂದರೆ ಯಾಗುವ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.ಪರ್ಯಾಯ ಸಂಚಾರ ಮಾರ್ಗಗಳಾದ ತೀರ್ಥಹಳ್ಳಿ –ಉಡುಪಿ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಮತ್ತು ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸುವುದು. ಉಡುಪಿ- ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮತ್ತು ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


More Stories
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!
ಸಿಟಿರೌಂಡ್ಸ್ ನ್ಯೂಸ್ ಬಿಗ್ ಇಂಫ್ಯಾಕ್ಟ್ 125 ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ದಾಳಿ 52 ವಾಹನಗಳು ವಶಕ್ಕೆ ..!!
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …