ಬೆಂಗಳೂರು: 03- ರಾಜ್ಯದ ಗಾರ್ಡನ್ ಸಿಟಿಯಲ್ಲಿ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆ. ನಕಲಿ ಔಷಧ ತಯಾರಿಕೆ ಮಾಡುತ್ತಿದ್ದ 5 ಅಡ್ಡೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬೇಟೆಯಾಡಿದ್ದಾರೆ. ಬೆಂಗಳೂರು ವಲಯದ ಇಡಿ ಅಧಿಕಾರಿಗಳು ಸೋಮವಾರ ಬೆಂಗಳೂರು ನಗರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯ ಒಟ್ಟು 5 ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ ನಕಲಿ ಔಷಧಿ ವಿಚಾರವಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದಾರೆ.
ಇ ಡಿ ದಾಳಿಯ ವೇಳೆ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೀರೇಶ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಖಾತೆಯಲ್ಲಿದ್ದ 9 ಲಕ್ಷ ರೂಪಾಯಿ ನಗದನ್ನು ಪತ್ತೆ ಹಚ್ಚಲಾಗಿದೆ. ಇದರೊಂದಿಗೆ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದ ವಿವಿಧ ವ್ಯಕ್ತಿಗಳಿಗೆ ಸೇರಿದ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳು ಹಾಗೂ ಮಹತ್ವದ ದಾಖಲೆಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿನ ಪ್ರಥಮ ವರ್ತಮಾನ:
ಈ ನಕಲಿ ಔಷಧಿ ದಂಧೆಗೆ ಸಂಬಂಧಿಸಿದಂತೆ ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಾಗಿತ್ತು. ಈ ಎಫ್ಐಆರ್ ಅನ್ನು ಆಧಾರವಾಗಿಟ್ಟುಕೊಂಡು ಇಡಿ ಅಧಿಕಾರಿಗಳು ಹೊಸದಾಗಿ ಇಸಿಐಆರ್ (ECIR) ದಾಖಲಿಸಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿರುವ ಇಡಿ, ಅಕ್ರಮ ಹಣದ ವಹಿವಾಟಿನ ಮೂಲವನ್ನು ಹುಡುಕಲು ಈ ದಾಳಿಗಳನ್ನು ನಡೆಸಿದೆ.
ತನಿಖೆಯ ವೇಳೆ ಈ ಅಕ್ರಮ ಜಾಲದ ಕರಾಳ ಮುಖ ಬಯಲಾಗಿದೆ. ದಂಧೆಯ ಪ್ರಮುಖ ಆರೋಪಿ ಆರ್. ಪ್ರಶಾಂತ್ ಎಂಬಾತ ಬಿಡದಿ ಬಳಿಯ ಫಾರ್ಮ್ಹೌಸ್ ಒಂದರಲ್ಲಿ ಯಾವುದೇ ಅಧಿಕೃತ ‘ಡ್ರಗ್ ಲೈಸೆನ್ಸ್’ ಇಲ್ಲದೆ ಅಕ್ರಮವಾಗಿ ಔಷಧಿಗಳ ತಯಾರಿಕೆ, ಮರು-ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದ. ಹೊರರಾಜ್ಯಗಳಿಂದ ಅತಿ ಕಡಿಮೆ ದರದಲ್ಲಿ ಸಿಗುವ ಸಾಮಾನ್ಯ ಜೆನೆರಿಕ್ ಔಷಧಿಗಳನ್ನು ತಂದು, ಅವುಗಳಿಗೆ ಪ್ರತಿಷ್ಠಿತ ‘ಫಿಜರ್’ (Pfizer) ಕಂಪನಿಯ ದುಬಾರಿ ಜೀವರಕ್ಷಕ ಆಂಟಿಬಯೋಟಿಕ್ ಇಂಜೆಕ್ಷನ್ಗಳಾದ ‘ಝಾವಿಸೆಫಾ’ (Zavicefta) ಮತ್ತು ‘ಎಂಬಾವಿಯೊ’ (Emblaveo) ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು.
ಅಸಲಿ ಔಷಧಿಗಳ ಜೊತೆಗೆ ನಕಲಿ ಅಡ್ಡೆ ‘ಕೃಪಾ ಹೆಲ್ತ್ಕೇರ್’
ಈ ನಕಲಿ ಔಷಧಿಗಳನ್ನು ಮಾರುಕಟ್ಟೆಗೆ ರವಾನಿಸಲು ಕದೀಮರು ಅತ್ಯಂತ ವ್ಯವಸ್ಥಿತ ಜಾಲವನ್ನು ಹೊಂದಿದ್ದರು. ಮೊದಲ ಹಂತದಲ್ಲಿ ‘ಡಿಎಂ ಫಾರ್ಮಸಿಯುಟಿಕಲ್ಸ್’ ಮೂಲಕ ಈ ನಕಲಿ ಔಷಧಿಗಳನ್ನು ಪೂರೈಸಿ, ಬಳಿಕ ‘ಕೃಪಾ ಹೆಲ್ತ್ಕೇರ್’ ಸಂಸ್ಥೆಗೆ ತಲುಪಿಸಲಾಗುತ್ತಿತ್ತು. ಅಲ್ಲಿ ಅಸಲಿ ಔಷಧಿಗಳ ಜೊತೆಗೆ ಈ ನಕಲಿ ದ್ರಾವಣಗಳನ್ನು ಮಿಶ್ರಣ ಮಾಡಿ, ವಿವಿಧ ಔಷಧ ವಿತರಕರು ಹಾಗೂ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಜನರಿಗೆ ವಂಚಿಸಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.


More Stories
ಟ್ರಾಫಿಕ್ ಚಲನ್ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!
ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ : ಸಚಿವ ಬಸವರಾಜ ರಾಯರೆಡ್ಡಿ..?
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!