City Rounds News

Kannada News Website

ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..

ಶಿವಮೊಗ್ಗ, ಅ 28 ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ವೈದ್ಯಕೀಯ ನೆರವು, ಪೌಷ್ಟಿಕ ಆಹಾರ ನೀಡಿ ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಕಾರ್ಯಕ್ರಮ ಮತ್ತು ಜಿಲ್ಲಾ ಸಮನ್ವಯ ಸಮಿತಿ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿ 460, ಗ್ರಾಮೀಣದಲ್ಲಿ 2013 ಒಟ್ಟು 2563 ಅಂಗನವಾಡಿ ಕೇಂದ್ರಗಳಿದ್ದು 2068 ಸ್ವಂತ ಕಟ್ಟಡ ಹೊಂದಿವೆ. 294 ಬಾಡಿಗೆ ಕಟ್ಟಡದಲ್ಲಿವೆ.183 ಕ್ಕೆ ನಿವೇಶನ ಲಭ್ಯವಿದ್ದು,  225 ಕ್ಕೆ ನಿವೇಶನ ಲಭ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ, ಶಾಲೆಗಳ ನೆಲ ಮಹಡಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಕೊಠಡಿ ಬಿಟ್ಟು ಕೊಟ್ಟಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಮೇಲ್ಛಾವಣಿಯಲ್ಲಿ ಶಾಲಾ ಕೊಠಡಿಯನ್ನು ನಿರ್ಮಿಸಿಕೊಡಲಿದ್ದು ಚಿಕ್ಕ ಮಕ್ಕಳಾದ ಅಂಗನವಾಡಿ ಮಕ್ಕಳಿಗೆ ಕೆಳ ಮಹಡಿಯ ಕಟ್ಟಡವನ್ನು ನೀಡುವಂತೆ ಡಿಡಿಪಿಐ ರವರಿಗೆ ತಿಳಿಸಿದರು.
ಅಮೃತ ನಗರೋತ್ಥಾನ ಯೋಜನೆಯಡಿ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ಅಂಗನವಾಡಿ ಕಟ್ಟಡ ಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ, ಬೆಳಕಿನ ವ್ಯವಸ್ಥೆ,  ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸಂಪರ್ಕ, ಪ್ರತ್ಯೇಕ, ಸ್ವಚ್ಛ ಹಾಗೂ ಮಕ್ಕಳು ಬಳಸಲು ಅನುಕೂಲಕರವಾದ ಶೌಚಾಲಯ ಒದಗಿಸಬೇಕೆಂದರು.
ಜಿ.ಪಂ. ಸಿಇಒ ರಿಷಿ ಆನಂದ್, ಮಾತನಾಡಿ
ಮಕ್ಕಳಿಗೆ ಪೌಷ್ಟಿಕಾಹಾರ ಪೂರೈಕೆಯಲ್ಲಿ 3 ರಿಂದ 6 ವರ್ಷ ಮಕ್ಕಳ ಪ್ರಗತಿ ಶೇ.92 ಇದ್ದು ಇದನ್ನು  ಹೆಚ್ಚಿಸಲು ಕ್ರಮ‌ ವಹಿಸಬೇಕು. ಆರೋಗ್ಯ ತಪಾಸಣೆಗಳನ್ನು ಹೆಚ್ಚಿಸಿದರೆ ತೀವ್ರ ಅಪೌಷ್ಟಿಕತೆ, ಅಪೌಷ್ಟಿಕತೆ ಯಿಂದ ಬಳಲುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ ಎಂದರು.
ಅಪೌಷ್ಟಿಕ ಮಕ್ಕಳ ವಿವರ: ಜಿಲ್ಲೆಯಲ್ಲಿ ಒಟ್ಟು 80,774 ಮಕ್ಕಳು ಅಂಗನವಾಡಿಯಲ್ಲಿ ದಾಖಲಾಗಿದ್ದು, 79,356 ಮಕ್ಕಳು ಸಾಮಾನ್ಯ ಮಕ್ಕಳಾಗಿದ್ದಾರೆ. ಜೂನ್-2026 ರ ಅಂಕಿಅಂಶದಂತೆ ಜಿಲ್ಲೆಯಲ್ಲಿ ಒಟ್ಟು 1,037 ಸಾಮಾನ್ಯ ಅಪೌಷ್ಟಿಕ ಮಕ್ಕಳು ಹಾಗೂ 52 ತೀವ್ರ ಅಪೌಷ್ಟಿಕ ಮಕ್ಕಳು ಇದ್ದಾರೆ. ಸೆಪ್ಟೆಂಬರ್-2026 ರ ವರದಿಯಂತೆ ಸಾಮಾನ್ಯ ಅಪೌಷ್ಟಿಕ ಮಕ್ಕಳ ಸಂಖ್ಯೆ 1,216 ಹಾಗೂ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ 62 ಕ್ಕೆ ತಲುಪಿದೆ.
ಅವರಿಗೆ ಪೌಷ್ಟಿಕ ಪುನಶ್ಚೇತನ ಕೇಂದ್ರಗಳ (ಎನ್ ಆರ್ ಸಿ) ಮೂಲಕ ಅಗತ್ಯ ಚಿಕಿತ್ಸೆ ಮತ್ತು ವೈದ್ಯಕೀಯ ಆರೈಕೆ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಆರೈಕೆ ಒದಗಿಸಿ ಅವರನ್ನು ಅಪೌಷ್ಟಿಕತೆ ಯಿಂದ ಹೊರತರಬೇಕು.ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪೋಷಕರಲ್ಲಿ ಅರಿವು ಮೂಡಿಸಬೇಕು. ಜೊತೆಗೆ, ಅಪೌಷ್ಟಿಕ ಮಕ್ಕಳ ಪೋಷಕರಿಗೆ ಸೂಕ್ತ ಸಲಹೆ ನೀಡಿ, ಸರ್ಕಾರದಿಂದ ಸಿಗುವ ಪೌಷ್ಟಿಕ ಆಹಾರ ಪದಾರ್ಥಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.
ಜೂನ್-2026 ರ ಅಂತ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆಯಡಿ ಒಟ್ಟು 105 ಪ್ರಕರಣಗಳು ಬಾಕಿ ಇದ್ದು, ಹೊಸದಾಗಿ 63 ಪ್ರಕರಣಗಳು ದಾಖಲಾಗಿವೆ. ಸಂರಕ್ಷಣಾಧಿಕಾರಿಗಳಲ್ಲಿ 29 ಹಾಗೂ ನ್ಯಾಯಾಲಯಗಳಲ್ಲಿ 13 ಪ್ರಕರಣಗಳು ಬಾಕಿ ಉಳಿದಿದ್ದು, ಒಟ್ಟು 42 ಪ್ರಕರಣಗಳು ಬಾಕಿ ಇರುತ್ತವೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ, ಪರಿಹಾರ ಹಾಗೂ ಕಾನೂನು ನೆರವು ಸಕಾಲದಲ್ಲಿ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತರಿಗೆ ಅಗತ್ಯ ರಕ್ಷಣೆ ಮತ್ತು ಸಮಾಲೋಚನೆ ಒದಗಿಸಬೇಕು. ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಸಾಂತ್ವನ ಯೋಜನೆ:

ಸಾಂತ್ವನ ಯೋಜನೆಯಡಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡಲಾಗುತ್ತಿದ್ದು, ಈ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 159 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 145 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.
ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಮತ್ತು ಇತರೆ ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು, ಪೊಲೀಸ್ ನೆರವು ಹಾಗೂ ಆಶ್ರಯ ಒದಗಿಸುವ ‘ಸಖಿ’ ಕೇಂದ್ರದ ಮೂಲಕ ಒಟ್ಟು 184 ಪ್ರಕರಣಗಳಿಗೆ ವಿವಿಧ ಸೇವೆಗಳನ್ನು ಒದಗಿಸಲಾಗಿದೆ. ಇದರಲ್ಲಿ ಕಾನೂನು ಸಮಾಲೋಚನೆ,ವೈದ್ಯಕೀಯ ನೆರವು ಮತ್ತು ಪೊಲೀಸ್ ನೆರವು, ಆಶ್ರಯ, ಸೈಕೊ ಸೋಷಿಯಲ್ ಸಮಾಲೋಚನೆ , ಶಕ್ತಿ ಸದನ ಪ್ರಮುಖವಾಗಿವೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದರು.
ಮಾನವ ಕಳ್ಳಸಾಗಣೆ ತಡೆ: ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಒಟ್ಟು 262 ಕಾವಲು ಸಮಿತಿಗಳನ್ನು ರಚಿಸಿ ಜಾಗೃತಿ ಮೂಡಿಸಲಾಗಿದೆ.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಪ್ರಗತಿ (ಮೊದಲ ಗರ್ಭಿಣಿ):ಏಪ್ರಿಲ್-2026 ರಿಂದ ಜೂನ್-2026 ರವರೆಗೆ ಜಿಲ್ಲೆಯಲ್ಲಿ ಮೊದಲ ಗರ್ಭಿಣಿಯರ ನೋಂದಣಿಗೆ ನಿಗದಿಪಡಿಸಿದ ಗುರಿಯಂತೆ ಒಟ್ಟು 1,867 ಗುರಿ ಇತ್ತು. ಇದರಲ್ಲಿ 1,912 ಸಾಧನೆ ಮಾಡಲಾಗಿದ್ದು, ಶೇಕಡಾ 102 ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೆಯೇ ಜುಲೈ-2026 ರಿಂದ ಸೆಪ್ಟೆಂಬರ್-2026 ರ ಅವಧಿಯಲ್ಲಿ 2,223 ಗುರಿಗೆ 2,290 ಸಾಧನೆಯೊಂದಿಗೆ ಶೇಕಡಾ 103 ರಷ್ಟು ಪ್ರಗತಿ ದಾಖಲಾಗಿದೆ.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಪ್ರಗತಿ (ಎರಡನೇ ಹೆಣ್ಣು ಮಗು):

ಎರಡನೇ ಮಗು ಹೆಣ್ಣಾದಾಗ ಪ್ರೋತ್ಸಾಹಧನ ನೀಡುವ ಈ ಯೋಜನೆಯಡಿ ಏಪ್ರಿಲ್ 2026 ರಿಂದ ಜೂನ್-2026 ರವರೆಗೆ 738 ಗುರಿಗೆ 652 ಸಾಧನೆ (ಶೇ. 88) ಹಾಗೂ ಜುಲೈ-2026 ರಿಂದ ಸೆಪ್ಟೆಂಬರ್-2026 ರವರೆಗೆ 817 ಗುರಿಗೆ 829 ಸಾಧನೆ (ಶೇ. 101) ಸಾಧಿಸಲಾಗಿದೆ.
ಪೋಕ್ಸೋ ಪ್ರಕರಣಗಳು: 2026-27ನೇ ಸಾಲಿನ ಜುಲೈಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 69 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಪ್ರಕರಣಗಳು ಶಿವಮೊಗ್ಗ ತಾಲ್ಲೂಕಿನಲ್ಲಿ 23 ದಾಖಲಾಗಿವೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 2012 ರಿಂದ 2026 ರ ಜೂನ್ ವರೆಗೆ ಪೋಕ್ಸೊ ಪ್ರಕರಣಗಳಲ್ಲಿ 185 ಫಲಾನುಭವಿಗಳಿಗೆ ಒಟ್ಟು ರೂ. 6.27 ಕೋಟಿ ಪರಿಹಾರ ನೀಡಲಾಗಿದೆ.
ಶಾಲಾ-ಕಾಲೇಜುಗಳಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ’ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಿ, ನಿಯಮಿತವಾಗಿ ಪರಿಶೀಲಿಸಬೇಕು.ಪ್ರಕರಣ ದಾಖಲಾದ ತಕ್ಷಣ ಸಂತ್ರಸ್ತ ಮಕ್ಕಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಸಾಂತ್ವನ ಹಾಗೂ ಕಾನೂನು ನೆರವು ಒದಗಿಸಬೇಕು. ಸಂತ್ರಸ್ತರ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು. ವಸತಿ ನಿಲಯಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ಸೂಕ್ತ ಭದ್ರತೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಬಾಲ್ಯ ವಿವಾಹ ತಡೆ ಹಾಗೂ ಪ್ರಕರಣಗಳು: ಜುಲೈಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 11 ಬಾಲ ವಿವಾಹಗಳು ತಡೆಯಲ್ಪಟ್ಟಿದ್ದು, ಬಾಲಮಂದಿರಕ್ಕೆ 3 ಮತ್ತು ಪೋಷಕರ ವಶಕ್ಕೆ 8 ಮಕ್ಕಳನ್ನು ನೀಡಿ ಸೂಕ್ತ ಕ್ರಮ ವಹಿಸಲಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಗ್ರಾಮ ಸಭೆಗಳು ಹಾಗೂ ಕಾರ್ಯಕ್ರಮಗಳಲ್ಲಿ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ’ಯ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ನಡೆಸುವುದು ಮಾತ್ರವಲ್ಲದೆ, ಅದಕ್ಕೆ ಪ್ರಚೋದನೆ ನೀಡುವವರು, ಕಲ್ಯಾಣ ಮಂಟಪದ ಮಾಲೀಕರು, ಮದುವೆಗೆ ಸಹಕರಿಸುವ ಮುದ್ರಕರು ಹಾಗೂ ಪೂಜಾರಿ/ಅರ್ಚಕರ ವಿರುದ್ಧವೂ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ವರದಕ್ಷಿಣೆ ನಿಷೇಧ ಕಾಯ್ದೆ-1961ರ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳು 15 ಇದ್ದು, ತನಿಖೆ ಮತ್ತು ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದರು.
ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಬಾಲನ್ತಾಯ ನಿಧಿ ಮಕ್ಕಳ ಕಲ್ಯಾಣ ಸಮಿತಿ, ದತ್ತು ಕಾರ್ಯಕ್ರಮ, ಬಾಲ ನ್ಯಾಯ ಮಂಡಳಿ, ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ರಿಷಿ ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಎಡಿಸಿ ಅಭಿಷೇಕ್ ವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಬ್ಲ್ಯು ಸಿ ಅಧ್ಯಕ್ಷರು, ಜೆಜೆಬಿ ಸದಸ್ಯರು,  ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.


ಕಲಾಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನ-ನ..

ಶಿವಮೊಗ್ಗ, ಅ, 28 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಲಾಪ್ರತಿಭೋತ್ಸವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಲಪ್ರತಿಭೆಗಳಿಗೆ 8 ರಿಂದ 13 ವರ್ಷ, ಕಿಶೋರ ಪ್ರತಿಭೆಗಳಿಗೆ 14 ರಿಂದ 18 ವರ್ಷ ಹಾಗೂ ಯುವ ಪ್ರತಿಭೆಗಳಿಗೆ 19 ರಿಂದ 30 ವರ್ಷ ವಯೋಮಾನದ ಕಲಾವಿದರು ಅರ್ಜಿ ಸಲ್ಲಿಸಬಹುದು. ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದುಸ್ತಾನಿ ವಾದ್ಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಆಶುಭಾಷಣ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ಸ್ಪರ್ಧೆ ನಡೆಯಲಿದೆ.
ಜಾನಪದ ನೃತ್ಯ ವಿಭಾಗದಲ್ಲಿ ಸಿದ್ಧಿ ಡಮಾಮಿ, ಡೊಳ್ಳು, ಗೋರವರ, ಗೊರವರ ಕುಣಿತ, ಕರಗ, ಸೋಮನಕುಣಿತ, ಪಟಕುಣಿತ, ಕಂಸಾಳೆ, ಪೂಜಾಕುಣಿತ, ಜಡೆ ಕೋಲಾಟ, ಲಂಬಾಣಿ, ಕರಡಿ ಮಜಲು ಹಾಗೂ ಕೋಡವ ನೃತ್ಯಗಳಿಗೂ ಅವಕಾಶವಿದೆ. ಜನಪದ ಗೀತೆಗಳ ಮುದ್ರಿತ ಹಾಡುಗಳ ನೃತ್ಯಗಳಿಗೆ ಅವಕಾಶವಿರುವುದಿಲ್ಲ.
ಅಕ್ಟೋಬರ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕುವೆಂಪು ವಿವಿ ಸಂಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2027-28ನೇ ಶೈಕ್ಷಣಿಕ ಸಾಲಿಗೆ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಹಾಗೂ ಮುಂದುವರಿಸಲು ಸಂಯೋಜನೆ ಪಡೆಯುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಕಲಂ 59(10)ರ ಪ್ರಕಾರ ಹೊಸ ಕಾಲೇಜುಗಳ ಪ್ರಾರಂಭ ಹಾಗೂ ಈಗಾಗಲೇ ಇರುವ ಕಾಲೇಜುಗಳ ಸಂಯೋಜನೆ ಮುಂದುವರಿಕೆಗೆ ಅರ್ಜಿಗಳನ್ನು ಯುಯುಸಿಎಂಎಸ್  ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವ್ಯಾಪ್ತಿಯ ಕಲಾ, ವಿಜ್ಞಾನ, ವಾಣಿಜ್ಯ, ಶಿಕ್ಷಣ, ಕಾನೂನು, ದೈಹಿಕ ಶಿಕ್ಷಣ ಹಾಗೂ ಇತರ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಯುಯುಸಿಎಂಎಸ್ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ.26 ರಿಂದ ಅವಕಾಶ ಕಲ್ಪಿಸಲಾಗಿದ್ದು, ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ನ.10 ಕೊನೆಯ ದಿನವಾಗಿದೆ. ರೂ.10,000 ದಂಡ ಶುಲ್ಕದೊಂದಿಗೆ ನ.11ರಿಂದ ನ.21ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.kuvempu.ac.in⁠ ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.