City Rounds News

Kannada News Website

ಟ್ರಾಫಿಕ್ ಚಲನ್‌ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!

ಶಿವಮೊಗ್ಗ 02 : ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಪೊಲೀಸ್ ಇಲಾಖೆಯ ಸಂಚಾರಿ E-Challan ಹಾಗೂ ಸಾರಿಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲು ಆರ್ಥಿಕ ಇಲಾಖೆಯು ಅಧಿಕೃತವಾಗಿ ಸಹಮತಿ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಬಾಕಿ ಇರುವ ಟ್ರಾಫಿಕ್ ಚಲನ್‌ಗಳನ್ನು ಶೇ. 50 ರಷ್ಟು ಕಡಿತದೊಂದಿಗೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ನವೆಂಬರ್ 21 ರಿಂದ ಡಿಸೆಂಬರ್ 11 ರವರೆಗೆ ಅವಕಾಶ:

ಈ ರಿಯಾಯಿತಿ ಕೊಡುಗೆಯು ದಿನಾಂಕ: 21.11.2026 ರಿಂದ ದಿನಾಂಕ: 11.12.2026 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಪೊಲೀಸ್ ಇಲಾಖೆಯ ಸಂಚಾರಿ E-Challan ನಲ್ಲಿ ದಾಖಲಾಗಿರುವ ಪ್ರಕರಣಗಳು ಸೇರಿದಂತೆ ಸಾರಿಗೆ ಇಲಾಖೆಯಲ್ಲಿ 1991 ರಿಂದ 2025 ರ ಅವಧಿಯಲ್ಲಿ ದಾಖಲಾಗಿ ಪಾವತಿಯಾಗದೆ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ದಂಡದ ಮೊತ್ತಕ್ಕೆ ಈ ಶೇ. 50ರಷ್ಟು ರಿಯಾಯಿತಿ ಅನ್ವಯವಾಗಲಿದೆ. ಈ ನಿಗದಿತ ಕಾಲಾವಧಿಯೊಳಗೆ ಸಾರ್ವಜನಿಕರು ತಮ್ಮ ಬಾಕಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಚುಕ್ತಾ ಮಾಡಿಕೊಳ್ಳಬಹುದಾಗಿದೆ.

ಸಾರಿಗೆ ಇಲಾಖೆಗೆ ಅಧಿಕೃತ ಪತ್ರ ರವಾನೆ:

ಈ ಯೋಜನೆಯನ್ನು ಜಾರಿಗೆ ತಂದು ತಕ್ಷಣವೇ ಅಧಿಕೃತ ಆದೇಶ ಹೊರಡಿಸುವಂತೆ ಸಾರಿಗೆ ಇಲಾಖೆಗೆ ಪತ್ರದ ಮೂಲಕ ಸೂಚನೆ ನೀಡಲಾಗಿದೆ. ಈ ರಿಯಾಯಿತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯು ತನ್ನ ಹಿಂಬರಹ ಸಂಖ್ಯೆ: ಆಇ 52 ವೆಚ್ಚ-11 2023, ದಿನಾಂಕ: 28.10.2026 ರ ಮೂಲಕ ಅಂತಿಮ ಅನುಮೋದನೆ ಮತ್ತು ಸಹಮತಿಯನ್ನು ನೀಡಿದೆ. ಸಾರ್ವಜನಿಕರು ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಮ್ಮ ವಾಹನಗಳ ಮೇಲಿರುವ ಹಳೆಯ ಬಾಕಿ ಚಲನ್‌ಗಳನ್ನು ಪಾವತಿಸಲು ಸಾರಿಗೆ ಇಲಾಖೆ ಕೋರಿದೆ.