ನಗರದ ತುಂಬೆಲ್ಲ ಗುಂಡಿ ಗಂಡಾಂತರ : ಕಂಡರೂ ಕಾಣದಂತೆ ಇರುವ ಭಂಡ ಅಧಿಕಾರಿಗಳ ಭಂಡಾಂತರ..!    

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ ಎಂ.

 

ಶಿವಮೊಗ್ಗ: ನಗರದ ಅನೇಕ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಹಾಗೂ 24×7 ನೀರಿನ ಸಂಪರ್ಕಕ್ಕಾಗಿ ಹಲವಾರು ಕಡೆ ಕಾಮಗಾರಿಯ ಹೆಸರಿನಲ್ಲಿ ಗುಂಡಿಗಳನ್ನು ತೋಡಿ ಸರಿಯಾದ ರೀತಿಯಲ್ಲಿ ಗುಂಡಿಗಳನ್ನು ಮುಚ್ಚದೆ, ಕಾಮಗಾರಿ ದುರಸ್ತಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ, ಮನಸೋ ಇಚ್ಚೆ ಬೇಕಾಬಿಟ್ಟಿಯಾಗಿ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ರಸ್ತೆಯನ್ನು ಅಗೆದು ಗುಂಡಿಗಳಾಗಿ ಮಾರ್ಪಡಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಬಿಟ್ಟಿರುತ್ತಾರೆ.

ಈ ರೀತಿಯ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಾಗ ವಾಹನ ಚಲಾಯಿಸುವಾಗ, 24×7 ನೀರಿನ ಸಂಪರ್ಕಕ್ಕಾಗಿ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ಇನ್ನಿತರ ಹಲವು ರೀತಿಯ ಕಾಮಗಾರಿಗಳಿಂದ ಅನೇಕ ರೀತಿಯ ಅಪಘಾತಗಳು ಸಂಭವಿಸಿವೆ. ಕಾಮಗಾರಿಯ ಸಲುವಾಗಿ ರಸ್ತೆಯನ್ನು ಅಗೆದು ಗುಂಡಿಗಳನ್ನಾಗಿ ಮಾರ್ಪಡಿಸಿದಂತ ಅನೇಕ ರೀತಿಯ ಉದಾಹರಣೆ ಶಿವಮೊಗ್ಗ ನಗರದ ಹಲವು ಬಡಾವಣೆಗಳ ಪ್ರತಿಯೊಂದು ಏರಿಯಾಗಳಲ್ಲಿ ಹಾಗೂ ರಸ್ತೆಗಳಲ್ಲಿ ಮುಖ್ಯ ರಸ್ತೆಗಳಲ್ಲಿ, ಸರ್ಕಲ್ ಗಳ ಸಿಗ್ನಲ್ ಮುಂಭಾಗದಲ್ಲಿ, ತಿರುವುಗಳಲ್ಲಿ, ಹೀಗೆ ಹೇಳುತ್ತಾ ಹೋದರೆ ಶಿವಮೊಗ್ಗ ನಗರದ ತುಂಬೆಲ್ಲ ಗುಂಡಿ ಗಂಡಾಂತರ ಎದುರಾಗಿದ್ದು, ಈ ರೀತಿಯ ಗುಂಡಿಗಳ ಗಂಡಾಂತರಕ್ಕೆ ಬಲಿಯಾದವರು ಅನೇಕರಿದ್ದಾರೆ ನಾಲ್ಕು ಚಕ್ರದ ವಾಹನಗಳು, ದ್ವಿಚಕ್ರದ ವಾಹನಗಳು ಹಾಗೂ ರಸ್ತೆಯಲ್ಲಿ ಮಕ್ಕಳು ಸೈಕಲ್ ಚಲಾಯಿಸುವಾಗ ಅನೇಕ ರೀತಿಯ ಘಟನೆಗಳು ಕಂಡುಬಂದಿದ್ದು  ಆದರೆ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ ,ಪ್ರಾಣಪಾಯ ದಿಂದ ಅನೇಕರು ಪಾರಾಗಿದ್ದಾರೆ.

ನಗರದ ಫ್ರೀಡಂ ಪಾರ್ಕ್ ಮುಂಭಾಗದ ಟ್ರಾಫಿಕ್ ಸಿಗ್ನಲ್ ಹತ್ತಿರ ಆಟೋ ಸ್ಟ್ಯಾಂಡ್ ಮುಂಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ತೆಗೆದಂತ ಗುಂಡಿ ಸುಮಾರು ಅರ್ಧ ಅಡಿಯಷ್ಟು ಆಳವಾಗಿದ್ದು , ಈ ಗುಂಡಿಯ ಗಂಡಾಂತರದಿಂದ ಸಿಗ್ನಲ್ ಬಿಟ್ಟ ನಂತರ ವಾಹನಗಳು ಚಲಿಸುವಾಗ ನಿಧಾನ ಗತಿ ಆಗುವುದರಿಂದ, ಸಿಗ್ನಲ್ ಮತ್ತೊಂದು ಕಡೆಯಿಂದ ಬಿಟ್ಟಾಗ ವಾಹನ ಸವಾರರಲ್ಲಿ ಸಮಸ್ಯೆಯಾಗುತ್ತಿದ್ದು ಅಪಘಾತಗಳು ಸಂಭವಿಸುವಂತಹ ಸಂದರ್ಭಗಳು ಹೆಚ್ಚಾಗಿದೆ. ಈ ರೀತಿಯಾದ ಸಮಸ್ಯೆಗಳು ನಗರದ ಅನೇಕ ಟ್ರಾಫಿಕ್ ಸಿಗ್ನಲ್ ಗಳ ಹತ್ತಿರ ಕಂಡುಬಂದಿದ್ದು ಹಾಗೂ 24×7 ನೀರಿನ ಕಾಮಗಾರಿಯಿಂದ ನಗರದ ತುಂಬೆಲ್ಲ ಗುಂಡಿಗಳ ಹಾವಳಿ ಹೆಚ್ಚಾಗಿದ್ದು ಸರಿಯಾದ ರೀತಿಯಲ್ಲಿ ಗುಂಡಿಯನ್ನು ಮುಚ್ಚುವಂತ ಕಾರ್ಯ ನಡೆದಿಲ್ಲ, ಈ ರೀತಿಯ ಸಮಸ್ಯೆಗೆ ಕಾರಣಕರ್ತರು ಅಧಿಕಾರಿಗಳೇ ಅಥವಾ ಗುತ್ತಿಗೆದಾರರೇ ಎಂಬುದು ಸಾರ್ವಜನಿಕರಿಗೆ ತಿಳಿಯದ ವಿಚಾರ.

ಆದರೆ ಈ ರೀತಿಯ ಕಾಮಗಾರಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತ  ಕೆಲಸ ಅಧಿಕಾರಿಗಳು ಮಾಡಬೇಕು. ಮುಂದಿನ ದಿನಗಳಲ್ಲಿ ಮಳೆಗಾಲ ಸಮೀಪಿಸುತ್ತಿದ್ದು ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಗಳು ಕಾಣದೆ ವಾಹನ ಚಲಾಯಿಸುವವರು ಅಥವಾ ಪಾದ ಚಾರಿಗಳು ಗುಂಡಿಗಳನ್ನು ಗಮನಿಸದೆ ಅನಾಹುತಗಳು ಸಂಭವಿಸಬಹುದು. ಅದರಿಂದ ಈ ರೀತಿಯ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಿರುವಂಥ ಅಧಿಕಾರಿಗಳ ವಿರುದ್ಧ ಹಾಗೂ ಗುತ್ತಿಗೆದಾರರ ವಿರುದ್ಧ ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕಾನೂನಿನ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಪರವಾಗಿ ಸಿಟಿ ರೌಂಡ್ಸ್ ಪತ್ರಿಕೆ ಬಳಗದಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

 

ವರದಿ : ಅಣ್ಣಪ್ಪ  ಎಂ.