
ಬೆಂಗಳೂರು:13
ಗ್ರೇಟರ್ ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ಅಕ್ರಮವಾಗಿ ಇ-ಖಾತಾ ಮಾಡಿಕೊಟ್ಟಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕಂದಾಯ ಇಲಾಖೆಯಲ್ಲಿ ಈ ಅಕ್ರಮ ನಡೆದಿದ್ದು, ಜಿಬಿಎ ವಿಶೇಷ ಆಯುಕ್ತ ಮನೀಷ್ ಮೌನ್ಸಿಲ್ ಅವರ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 33 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಬ್ಯಾಂಕ್‌ಗಳಿಂದ ಹರಾಜಾಗುವ ಅಡಮಾನ ಆಸ್ತಿಗಳಿಗೆ ಮಾತ್ರ ಇ-ಖಾತಾ ಸೃಷ್ಟಿಸಲು ‘ಇ-ಆಸ್ತಿ’ ತಂತ್ರಾಂಶದಲ್ಲಿ ಒದಗಿಸಲಾಗಿದ್ದ ವಿಶೇಷ ಮಾಡ್ಯೂಲ್ ಅನ್ನು ಈ ಹಗರಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್‌ಗಳಿಗೆ ನಕಲಿ ಹಾಗೂ ಅಪೂರ್ಣ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಕ್ರಮವಾಗಿ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಂದಾಯ ವಿಭಾಗದ ಸಹಾಯಕ ಆಯುಕ್ತ ಬಸವರಾಜ್ ಮಾಗಿ ಸೇರಿದಂತೆ ಖಾಸಗಿ ಬಿಲ್ಡರ್‌ಗಳು ಹಾಗೂ ಅರ್ಜಿದಾರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಅಧಿಕೃತ ಮಾರಾಟ ಪ್ರಮಾಣಪತ್ರ ಅಥವಾ ಅಗತ್ಯ ಕಾನೂನು ದಾಖಲೆಗಳ ಬದಲಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳು, ಮೂಲ ನಿವೇಶನದ ಕ್ರಯಪತ್ರಗಳು ಹಾಗೂ ಕಟ್ಟಡ ಪರವಾನಗಿಗಳಂತಹ ಮಾನದಂಡಗಳಿಗೆ ಒಳಪಡದ ದಾಖಲೆಗಳನ್ನು ಬಳಸಿಕೊಳ್ಳಲಾಗಿದೆ. ತಾಂತ್ರಿಕ ಪರಿಶೀಲನೆ ನಡೆಸಿದಾಗ ಯಾವುದೇ ಅರ್ಹತೆಯಿಲ್ಲದ ಹಾಗೂ ಸೂಕ್ತ ದಾಖಲೆಗಳಿಲ್ಲದ ಬರೋಬ್ಬರಿ 98 ಅನರ್ಹ ಆಸ್ತಿಗಳಿಗೆ ಇ-ಖಾತಾಗಳನ್ನು ಅನುಮೋದಿಸಿರುವುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ತನಿಖೆ ಮುಂದುವರಿದಿದೆ.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ನಕಲಿ ಔಷಧ ಅಡ್ಡೆಗಳ ಮೇಲೆ ಇ ಡಿ ದಾಳಿ!!
ಟ್ರಾಫಿಕ್ ಚಲನ್ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!