City Rounds News

Kannada News Website

ದೀನ್‌ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ…!

 

 

ಶಿವಮೊಗ್ಗ: ಆ.23: ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಕಲೆಯನ್ನು ಉತ್ತೇಜಿಸಲು ಅಂಚೆ ಇಲಾಖೆಯು ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲು 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

 ಎಸ್‌.ಪಿ.ಎ.ಆರ್‌.ಎಸ್‌.ಹೆಚ್.(ಸ್ಪರ್ಶ್) ಅಂಚೆ ಚೀಟಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ನೀಡುವ ವಿಧ್ಯಾರ್ಥಿವೇತನವಾಗಿದೆ.ಪಠ್ಯಕ್ರಮವನ್ನು ಬಲಪಡಿಸುವುದು ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ಚಿಕ್ಕವಯಸ್ಸಿನ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹವನ್ನು ಉತ್ತೇಜಿಸುವುದೇ ಈ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಹವ್ಯಾಸವು ಅವರಿಗೆ ಜ್ಞಾನಾರ್ಜನೆ, ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. 2025 ರ ವಾರ್ಷಿಕ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಹೊಂದಿರುವ, ಅಂಚೆ ಚೀಟಿ ಸಂಗ್ರಹಣಾ ಠೇವಣಿ ಖಾತೆಯನ್ನು ಹೊಂದಿರುವ, ಕ್ಲಬ್ ಅಂಚೆ ಚೀಟಿ ಸಂಗ್ರಹಣಾ ಸದಸ್ಯತ್ವ ಹೊಂದಿರುವ ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಅನುಸರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ. 6000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

 ಮೊದಲ ಹಂತದಲ್ಲಿ ಅಂಚೆ ಚೀಟಿ ಸಂಗ್ರಹಣಾ ರಸಪ್ರಶ್ನೆ ಸ್ಪರ್ಧೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಅಂಚೆ ಇಲಾಖೆ ನೀಡುವ ಅಂಚೆ ಚೀಟಿ ಸಂಗ್ರಹಣಾ ಯೋಜನೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ಎಸ್‌.ಪಿ.ಎ.ಆರ್‌.ಎಸ್‌.ಹೆಚ್.(ಸ್ಪರ್ಶ್) ಯೋಜನೆಯ ವಿದ್ಯಾರ್ಥಿ ವೇತನಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ www. indiapost.gov.in ಮತ್ತು www.karnatakapost.gov.in ಭೇಟಿ ನೀಡಬಹುದೆಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ತಿಳಿಸಿದ್ದಾರೆ.