ಜೂನ್ 16 ರಿಂದ ಜುಲೈ 31ರವರೆಗೆ ಅತಿಸಾರ ನಿಲ್ಲಿಸಿ ಅಭಿಯಾನ : ಎನ್.ಹೇಮಂತ್…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ. ಎಂ 

ಶಿವಮೊಗ್ಗ : ಜೂನ್ 17 – ಜಿಲ್ಲೆಯಲ್ಲಿ ಅತಿಸಾರದಿಂದ ಉಂಟಾಗುವ ಮಕ್ಕಳ ಸಾವುಗಳನ್ನು ಶೂನ್ಯಕ್ಕೆ ಇಳಿಸುವ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವಂತೆ ಮಾಡುವ ಸದುದ್ದೇಶದೊಂದಿಗೆ ಜೂನ್‌16ರಿಂದ ಜುಲೈ 31ರವರೆಗೆ ಜಿಲ್ಲೆಯಾದ್ಯಂತ ಅತಿಸಾರ ನಿಲ್ಲಿಸಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಹೇಳಿದರು.

 ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜೂನ್‌16ರಿಂದ ಜುಲೈ 31ರವರೆಗೆ ಆಯೋಜಿಸಲಾಗುತ್ತಿರುವ ಅತಿಸಾರ ನಿಲ್ಲಿಸಿ ಅಭಿಯಾನದ ಕುರಿತು ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಆರೋಗ್ಯ ಕೇಂದ್ರಗಳ ಸಿಬ್ಬಂಧಿಗಳು ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಮಟ್ಟದಲ್ಲಿ ಮನೆಮನೆಗೆ ತೆರಳಿ ಓಆರ್ ಎಸ್‌ವಿತರಣೆ ಮತ್ತು ತಯಾರಿಕೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೇ ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮಾಭಿವೃದ್ಧಿ ಪ್ರತಿನಿಧಿಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

 ಶಿವಮೊಗ್ಗ ಜಿಲ್ಲೆಯಲ್ಲಿ 0-5 ವರ್ಷದೊಳಗಿನ 1,06,070 ಮಕ್ಕಳು ದಾಖಲಾತಿಯಾಗಿದ್ದು ಎಲ್ಲಾ ಮಕ್ಕಳಿಗೆ ತಪ್ಪದೇ ಓ.ಆರ್.ಎಸ್ ಪ್ಯಾಕೆಟ್ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸಿ ಅತಿಸಾರ ಭೇದಿ, ಕೈ ತೊಳೆಯುವ ವಿಧಾನ, ಶುದ್ಧ ಕುಡಿಯುವ ನೀರು ಉಪಯೋಗಿಸುವ ಬಗ್ಗೆ ಹಾಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ಹೇಮಂತ್‌ ಹೇಳಿದರು.

 

 ಇದೇ ಸಂದರ್ಭದಲ್ಲಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡುವಂತೆ ಕೈತೊಳೆಯುವ ಪ್ರದರ್ಶನ ಮತ್ತು ಪ್ರಾತ್ಯಕ್ಷಿತೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸುವಂತೆಯೂ ಸೂಚಿಸಲಾಗಿದೆ ಎಂದವರು ನುಡಿದರು.

 

 ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗುವ ಎಲ್ಲಾ ಕಾರ್ಯಕ್ರಮಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳೊಂದಿಗೆ ಸ್ಥಳೀಯರ, ಜನಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ ಅವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಅಭಿಯಾನದ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯವಾಗಿರುವ ಓಆರ್‌ಎಸ್‌ಸ್ಯಾಚೆಟ್‌ಗಳು ಮತ್ತು ಸತುವಿನ ಮಾತ್ರೆಗಳನ್ನು ಸಕಾಲದಲ್ಲಿ ತಲುಪಿಸುವಂತೆ ನೋಡಿಕೊಳ್ಳಬೇಕು. ತಾಲೂಕು ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.

 

 ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅತಿಸಾರ ನಿಲ್ಲಿಸಿ ಅಭಿಯಾನದ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್.ಕೆ.ಎಸ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಲ್ಲಪ್ಪ.ಓ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ತಾಲ್ಲೂಕು ಆರೋಗ್ಯಧಿಕಾರಿ ಡಾ.ಚಂದ್ರಶೇಖರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಉಪನೀರ್ದೆಶಕರು ಮತ್ತು ಶಿಕ್ಷಣ ಇಲಾಖೆಯ ಉಪನೀರ್ದೆಶಕರು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.