ಅನ್ನಭಾಗ್ಯ ಯೋಜನೆಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರದಿಂದ “ಅನ್ನ ಸೇವೆ” ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಜನತೆಯ ಸಮಯ ಮತ್ತು ಶ್ರಮವನ್ನು ಉಳಿಸುವ ನಿಟ್ಟಿನಲ್ಲಿ ಈ ಡಿಜಿಟಲ್ ಸೇವೆಯನ್ನು ಆರಂಭಿಸಲಾಗಿದೆ. ಇನ್ಮುಂದೆ ಫಲಾನುಭವಿಗಳು ಇ-ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ, ತಮ್ಮ ಮೊಬೈಲ್‌ನಲ್ಲಿಯೇ ಮನೆಯಲ್ಲಿ ಕುಳಿತು ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು.
ಇ-ಕೆವೈಸಿ ಕಡ್ಡಾಯ: ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರು (ಹಿರಿಯರು, ಮಕ್ಕಳು ಹಾಗೂ ‘ಫೇಸ್ ಅಥೆಂಟಿಕೇಷನ್’ ಸೌಲಭ್ಯ ಬಳಸಿ) ಸರ್ಕಾರದ ನಿರ್ದೇಶನದಂತೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಉಚಿತ ಸೇವೆ: ನ್ಯಾಯಬೆಲೆ ಅಂಗಡಿಗಳಲ್ಲಿ ಬಿ.ಪಿ.ಎಲ್ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ. ಹಣ ಪಡೆಯುತ್ತಿರುವ ದೂರುಗಳು ಬಂದರೆ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಆಹಾರ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮತ್ತು ಪಡಿತರ ವಿತರಣೆಯನ್ನು ಚುರುಕುಗೊಳಿಸಲು ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು ಎಂದು ಸರ್ಕಾರ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ಅಂಕಿ-ಅಂಶಗಳು: ಜಿಲ್ಲೆಯಲ್ಲಿ ಒಟ್ಟು 4,96,728 ಕಾರ್ಡ್‌ಗಳಿದ್ದು, ಈ ಪೈಕಿ 3,40,499 ಬಿ.ಪಿ.ಎಲ್ ಕಾರ್ಡ್‌ಗಳು, 1,20,178 ಎ.ಪಿ.ಎಲ್ ಕಾರ್ಡ್‌ಗಳು ಮತ್ತು 3,6,051 ಅಂತ್ಯೋದಯ ಕಾರ್ಡ್‌ಗಳು ಚಾಲ್ತಿಯಲ್ಲಿವೆ.
ರೇಷನ್ ಕಾರ್ಡ್ ಸಕ್ರಿಯವಾಗಿರಲು ಹಾಗೂ ಉಚಿತ ಅಕ್ಕಿ ಸೌಲಭ್ಯ ಮುಂದುವರಿಯಲು ಇ-ಕೆವೈಸಿ ಕಡ್ಡಾಯವಾಗಿದೆ. ಆದ್ದರಿಂದ ರೇಷನ್ ಕಾರ್ಡ್‌ನಲ್ಲಿರುವ ಎಲ್ಲಾ ಸದಸ್ಯರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಆಧಾರ್ ಕಾರ್ಡ್ ಮತ್ತು ಲಿಂಕ್ ಆಗಿರುವ ಮೊಬೈಲ್‌ನೊಂದಿಗೆ ತೆರಳಿ ಬಯೋಮೆಟ್ರಿಕ್ ಮೂಲಕ ಅಥವಾ ತಾವೇ ಸ್ವತಃ ‘ಅನ್ನ ಸೇವೆ’ ಆ್ಯಪ್ ಮೂಲಕ ದಿನಾಂಕ 20-10-2026 ರೊಳಗಾಗಿ ಇ-ಕೆವೈಸಿ ದೃಢೀಕರಣ ಪೂರ್ಣಗೊಳಿಸಬೇಕೆಂದು ಅವರು ಕೋರಿದ್ದಾರೆ.
More Stories
ಶಿವಮೊಗ್ಗ ಸಿನಿ ದಸರಾ: ಅಕ್ಟೋಬರ್ 14 ರಿಂದ ‘ಫಾಲ್ಕೆ ಪಲ್ಲಕ್ಕಿಯಲ್ಲಿ ರಾಜ್ – ಅನಂತ್ ಸಿನಿ ಸಂಭ್ರಮ’
ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಪ್ರಜಾಸೇವಾ ಆಂದೋಲನ ಸಭೆ ಸಹಕಾರಿ : ಸಚಿವ ಎಸ್ ಮಧು ಬಂಗಾರಪ್ಪ
ಆಹಾರ ದಸರಾ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳು